ಖಿಜರ್ ಖಾನ್

	ದೆಹಲಿಯ ಸುಲ್ತಾನನಾಗಿದ್ದ ಅಲ್ಲಾವುದ್ದೀನ್ ಖಲ್ಜಿಯ (1296-1316) ಹಿರಿಯ ಮಗ. ಅಲ್ಲಾವುದ್ದೀನ್ 1303ರಲ್ಲಿ ಮೇವಾಡವನ್ನು ಜಯಿಸಿದಾಗ ಅದರ ರಾಜಧಾನಿಯಾದ ಚಿತ್ತೂರಿಗೆ ಖಿಜûರಾಬಾದ್ ಎಂದು ನಾಮಕರಣ ಮಾಡಿ ಖಿಜûರ್ ಖಾನನನ್ನು ಅಲ್ಲಿ ಗವರ್ನರಾಗಿ ನೇಮಿಸಿ ದೆಹಲಿಗೆ ಹಿಂದಿರುಗಿದ. ಅದನ್ನು ಮತ್ತೆ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ರಜಪೂತರ ಒತ್ತಡದಿಂದಾಗಿ 1311ರ ವೇಳೆಗೆ ಖಿಜûರ್ ಖಾನ್ ಚಿತ್ತೂರನ್ನು ಬಿಟ್ಟು ಹೊರಡಬೇಕಾಯಿತು. ಮಲ್ಲಿಕ್ ಕಾಫುರನ ನೇತೃತ್ವದಲ್ಲಿ ದಕ್ಷಿಣದ ಕಡೆಗೆ ವಿಜಯಯಾತ್ರೆ ಹೊರಟ ಅಲ್ಲಾವುದ್ದೀನನ ಸೇನೆ ದೇವಗಿರಿಯ ರಾಮಚಂದ್ರದೇವನನ್ನು ಮಣಿಸಿದಾಗ, ಅವನಲ್ಲಿ ಆಶ್ರಯ ಪಡೆದಿದ್ದ ಗುಜರಾತಿನ ಮಾಜಿ ದೊರೆ ರಾಯಿ ಪರ್ಣದೇವನ ಮಗಳಾದ ದೇವಲಾದೇವಿಯನ್ನು ಸೆರೆಹಿಡಿದು ಗುಜರಾತಿನ ಗವರ್ನರಾದ ಆಲ್ಪ್ ಖಾನನ ಮೂಲಕ ದೆಹಲಿಯ ಸುಲ್ತಾನ ಅಲ್ಲಾವುದ್ದೀನನಿಗೆ ಒಪ್ಪಿಸಲಾಯಿತು. ಆಕೆಯನ್ನು ಖಿಜûರ್ ಖಾನ್ ಮದುವೆಯಾದ. (1307). ಕವಿ ಅಮೀರ್ ಖುಸ್ರು ಇವರಿಬ್ಬರ ಪ್ರೇಮವನ್ನು ಕುರಿತ ಕವನವನ್ನು ರಚಿಸಿದ್ದಾನೆ.

	ಅಲ್ಲಾವುದ್ದೀನ್ ಖಲ್ಜಿಯ ಮರಣಾನಂತರ (1316) ಖಿಜûರ್ ಖಾನನೇ ಸುಲ್ತಾನನಾಗುವನೆಂದು ನಿರೀಕ್ಷಿಸಲಾಗಿತ್ತು. ಆದರೆ ಆ ವೇಳೆಗೆ ಪ್ರಬಲನಾಗಿದ್ದ ಮಲ್ಲಿಕ್ ಕಾಫುರ್ ಅಲ್ಲಾವುದ್ದೀನನದೆನ್ನಲಾದ ಉಯಿಲೊಂದನ್ನು ಪ್ರಕಟಪಡಿಸಿ, ಅದರಂತೆ ಅಲ್ಲಾವುದ್ದೀನನ ಐದಾರು ವರ್ಷಗಳ ಮಗನಾದ ಷಿಹಾಬುದ್ದೀನನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ಅವನ ಪರವಾಗಿ ತಾನೇ ರಾಜ್ಯವಾಳತೊಡಗಿದ. ಖಿಜûರ್ ಖಾನನ ಮತ್ತು ಅವನ ತಮ್ಮ ಷಾದೀ ಖಾನನ ಕಣ್ಣುಗಳನ್ನು ಕೀಳಿಸಿದ. ಅಲ್ಲಾವುದ್ದೀನನ ಹೆಂಡತಿಯ ಸಂಪತ್ತನ್ನೆಲ್ಲ ದೋಚಿಕೊಂಡು ಅವಳನ್ನು ಸೆರೆಮನೆಗೆ ಕಳುಹಿಸಿದ. ಅಲ್ಲಾವುದ್ದೀನನ ಮೂರನೆಯ ಮಗನಾದ ಮುಬಾರಕನೂ ಸೆರೆಯಾದ. ಅವನ ಕಣ್ಣುಗಳನ್ನೂ ಕೀಳಿಸುವುದು ಮಲ್ಲಿಕ್ ಕಾಫುರನ ಉದ್ದೇಶವಾಗಿತ್ತು. ಆದರೆ ಅಲ್ಲಾವುದ್ದೀನನ ಸೇವಕರು ಕೆಲವರು ಕಾಫುರನನ್ನು ಕೊಲೆ ಮಾಡಿದರು. ಅವನ ಮೂವತ್ತೈದು ದಿನಗಳ ಆಡಳಿತ ಕೊನೆಗೊಂಡಿತು. ಸೆರೆಯಿಂದ ಬಿಡುಗಡೆ ಹೊಂದಿದ ಮುಬಾರಕ್ ರಾಜಪ್ರತಿನಿಧಿಯಾದ. ಆದರೆ ಅರವತ್ನಾಲ್ಕು ದಿನಗಳ ರಾಜಪ್ರತಿನಿಧಿ ಆಡಳಿತದ ಅನಂತರ ಆತ ಷಿಹಾಬುದ್ದೀನನ ಕಣ್ಣು ಕೀಳಿಸಿ ತಾನೇ ಸಿಂಹಾಸನವನ್ನೇರಿದ. ಅಂತೂ ಖಿಜûರ್ ಖಾನನಿಗೆ ರಾಜ್ಯ ದಕ್ಕಲಿಲ್ಲ.						(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ